ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Thursday, January 22, 2015

ಪ್ರೀತಿಸ್ತಿದ್ದೀರಾ, ಒದ್ನಿಮಿಷ ಈ ಕಡೆ ಕೇಳಿ.......

ಪ್ರೀತಿಸ್ತಿದ್ದೀರಾ, ಒದ್ನಿಮಿಷ ಕಡೆ ಕೇಳಿ.......

ಪ್ರಿಯರೇ, ವರ್ಷದ ಪ್ರೀತಿದಿನ ಅಕ್ಕರೆಯಿಂದ ಅಪ್ಪಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಪ್ರೀತಿ ಅನ್ನೋದು ವ್ಯಾಖ್ಯಾನಗಳಿಗೆ ನಿಲುಕದ ವಿಶಿಸ್ಟ ಭಾವನೆ. ಅದು ಎಸ್ಟು ವಿಶಿಸ್ಟವೋ ಅಸ್ಟೇ ವಿಚಿತ್ರ. ಅದು ವಿಭಿನ್ನ ಮುಖಗಳನ್ನು ವಿಭಿನ್ನ ಆಯಾಮಗಳನ್ನು ಒಳಗೊಂಡಿದೆ. ಇವೆಲ್ಲದರ ನಡುವೆ ನಮ್ಮ ನಿಜವಾದ ಮುಖವನ್ನು/ವ್ಯಕ್ತಿತ್ವವನ್ನು ಮರೆಯಬಾರದು. ಹಾಗಾಗಿ ಪ್ರೀತ್ಸೊರಿಗಾಗಿ ಪ್ರೀತಿಯಿಂದ ಒಂದೆರಡು ಮಾತ್ಗಳು. ಹೃದಯ ತೆರೆದು ಕೇಳಿಸ್ಕೊಳ್ಳಿ.....

1. ಪ್ರಾಮಾಣಿಕವಾಗಿ ಪ್ರೀತಿಸಿ. ಉಸಿರಿರೊವರೆಗು ಅದನ್ನು ಉಳಿಸಿಕೊಳ್ಳಿ. ಇಲ್ಲಾ ಅಂದ್ರೆ ಉಸಿರಾಟದ ತೊಂದರೆಗಳು ಕಾಣಿಸ್ಕೊಳ್ತಾವೆ.

2. ಅವಶ್ಯಕತೆ ಅಥವಾ ಅನಿವಾರ್ಯತೆಗಾಗಿ  ದಯವಿಟ್ಟು ಪ್ರೀತಿಸ್ಬೇಡಿ ಅಥವಾ ಅವಶ್ಯಕತೆ-ಅನಿವಾರ್ಯತೆಯನ್ನು ಪ್ರೀತಿಯಾಗಿ ಮಾರ್ಪಡಿಸಿಕೊಳ್ಳಬೇಡಿ. ಹಾಗಾದರೆ ಅದು ನೀವು ನಿಮಗೆ ಪರಸ್ಪರ ಮಾಡಿಕೊಳ್ಳುವ ಮೋಸ.

3.ಪ್ರೀತಿ ಎನ್ನುವುದು ಜಾತಿ-ಮತ, ಚೆಲುವು-ನಲಿವು,ಭಾಷೆ-ಪ್ರ್ರಾಂತ್ಯ-ಪ್ರಬುದ್ದತೆ-ಬುದ್ದಿವಂತಿಕೆ-ಸೌಂದರ್ಯ-ಸಿರಿತನ ಇವೆಲ್ಲದರಾಚೆಗಿನ ಮಧುರ-ಅಮರ ಭಾವನೆ. ಯಾರೂ ಯೋಚಿಸಿ ಪ್ರೀತಿಸುವುದಕ್ಕಾಗೋದಿಲ್ಲ. ಆದ್ರೆ ಪೀತಿಸಿದ ಮೇಲೆ ಇವೆಲ್ಲದರ ಬಗ್ಗೆ ಖಂಡಿತ ಯೋಚಿಸ್ಭೇಡಿ. ನೆಮ್ಮದಿ ಹಾಳಾಗುತ್ತದೆ.

4.ಪ್ರೀತಿಗೆ ಎಲ್ಲಾ ಅಡೆತಡೆಗಳನ್ನು ಮೀರುವ ಶಕ್ತಿ ಇರುತ್ತದೆ. ಜೊತೆಗೆ ಆರ್ಥಿಕ ಸ್ವಾತಂತ್ರ ಗಳಿಸ್ಕೊಳ್ಳಿ. ಆಗ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಶಕ್ತರಾಗ್ತೀರಿ.ಆದ್ರೆ ಅಡೆ ತಡೆಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ನಿಮ್ಮ ಪ್ರೀತಿಯನ್ನು ಬಲಿಕೊಡಬೇಡಿ.

5.ಕಾಮವಿಲ್ಲದ ಪ್ರೇಮ ಪರಿಪೂರ್ಣವಾಗಲಾರದು ಎಂಬ ಮಾತಿದೆ. ಆದರೆ ಒದುವ ದಿನಗಳಲ್ಲಿ ಅದಕ್ಕೆ ಆಸ್ಪದ ಕೊಡಬೇಡಿ.

6.ಪ್ರೀತಿ ಯಾರನ್ನು ಮುಳುಗಲು ಬಿಡುವುದಿಲ್ಲ. ಪಾರ್ಕು,ಗಿಪ್ಟು,ಕಾಡುಹರಟೆ,ಹೊಟೆಲ್ಲು,ಪಿಕ್ನಿಕ್,ಕಿಕ್ಕು ಗಳೆಂಬ ಮಾಯೆಗಳಲ್ಲಿ ಮುಳುಗಿಹೋಗಬೇಡಿ. ಎಲ್ಲವೂ ಹಿತಮಿತವಾಗಿದ್ದರೆ ಪ್ರೀತಿ ನಿಮಗೆ ಹಿತನೀಡುತ್ತದೆ.

7. ತಮ್ಮ ಪ್ರೀತಿಪಾತ್ರರ ಬಗ್ಗೆ ಅತಿಯಾದ ಪೊಸೆಸಿವ್ ಆಗಿಬಿಡಬೇಡಿ. ಅದು ಬಂಧನವಾಗಿ ನಿಮ್ಮ ಭಾಂದವ್ಯಕ್ಕೆ ಕುತ್ತು ಬರಬಹುದು.

8. ಪ್ರೀತಿ ಅನ್ನೋದು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಆದ್ರೆ ಬಂದ್ಮೇಲೆ ನಿಮ್ಮ ಜವಾಬ್ದಾರಿಗಳನ್ನ/ಕರ್ತವ್ಯಗಳನ್ನ ನಿರ್ಲಕ್ಷಿಸಬೇಡಿ.

9. ನೀವು ನಿಜಕ್ಕೂ ಯಾರನ್ನಾದರೂ ಪ್ರೀತಿಸುತ್ತಿದ್ದರೆ , ಪ್ರೀತಿಯ ಭಾವ ಗಟ್ಟಿಯಾಗಿದ್ದರೆ ಬಿಗುಮಾನ ಬಿಟ್ಟು ಅವರಿಗೆ ಹೇಳಿಬಿಡಿ. ಮನಸ್ಸಿನಲ್ಲಿಟ್ಟುಕೊಂಡು ಕೊರಗಬೇಡಿ. ಇಲ್ಲಾಂದ್ರೆ 'ಪ್ರಯಾಣದ ನಂತರ ಟಿಕೇಟು' ಖರೀದಿಸಿದ ಹಾಗೆ ಆಗುತ್ತೆ.

10.ಪ್ರೀತಿಸಿದ ಮೇಲೆ ನಂಬಿಕೆ,ಧ್ಯರ್ಯ,ಸಹನೆಗಳನ್ನು ಸದಾ ನಿಮ್ಮೊಟ್ಟಿಗೆ ಇಟ್ಟುಕೊಳ್ಳಿ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಇವು ಬಹಳ ಮುಖ್ಯ.

11. ಒಂದು ವೇಳೆ ನಿಮ್ಮನ್ನು ಪ್ರೀತಿಸಿದ ಜೀವ ಬಿಟ್ಟುಹೋದರೆ ನೀವು ಜೀವ ಬಿಡಬೇಡಿ. 'ನಮ್ಮ ಬದುಕಿನಲ್ಲಿ ಅವರ ಪಾತ್ರ ಅಸ್ಟೆ' ಅಂತಾ ಅಂದುಕೊಳ್ಳಿ.ವಿಧಿಯನ್ನು ಹಳಿಯುತ್ತಾ ನೀವು ಕಳೇಬರ ವಾಗಬೇಡಿ. 'ಭಗ್ನ ಪ್ರೇಮವು ಸಾಧನೆಗೆ  ಸ್ಪೂರ್ತಿಯಾಗಬಲ್ಲದು'.

12.ಪ್ರೀತಿಸಿದ ಹುಡುಗ/ಗಿ ಮೋಸ ಮಾಡಿದ ತಕ್ಷಣ ಅವರನ್ನು ದ್ವೇಷಿಸಬೇಡಿ. ಅವರ ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಮಾಡಬೇಡಿ. ನೀವು ನಿಜವಾಗಿ ಪ್ರೀತಿಸಿದ್ದೇ ಆದರೆ 'ಪ್ರೀತಿಸಿದ ಜೀವ ಚೆನ್ನಾಗಿರಲಿ' ಎಂದು ಹಾರೈಸಿ ನಿಮ್ಮ ದೊಡ್ಡತನ ಮೆರೆಯಿರಿ. ಕಹಿಯೋ, ಸಿಹಿಯೋ ಅಧ್ಯಾಯವನ್ನು ನಿಮ್ಮ ಬದುಕಿನ ಪುಸ್ತಕದಿಂದ ಡಿಲೀಟ್ ಮಾಡಿ ಮಸ್ತಕವನ್ನು ಸುಸ್ತಿತಿಯಲ್ಲಿಟ್ಟುಕೊಳ್ಳಿ.

13.ಪ್ರೀತಿಯ ಹೆಸರಲ್ಲಿ ಒಂದು ಮುಗ್ಧ ನಂಬಿಕೆಯನ್ನು ಬಲಿಕೊಡಬೇಡಿ.ಪ್ರೀತಿಯನ್ನು ಗೌರವಿಸಿ,ಅಕ್ಕರೆಯಿಂದ ಪೋಷಿಸಿ.
14. ಬದುಕಿನಲ್ಲಿ ಕೆಲವು 'ಯಾಕೆ' ಗಳಿಗೆ ಉತ್ತರ ಸಿಗೋದಿಲ್ಲ. ಉತ್ತರ ಹುಡುಕುವ ಪ್ರಯತ್ನ ಮಾಡದೆ, ಬದುಕು ಬಂದಂತೆ ಸ್ವೀಕರಿಸಬೇಕು. ಪ್ರೀತಿಸಿದ ಮೇಲೆ ಪ್ರತೀ ಕ್ಷಣದ ಬದಲಾವಣೆಗಳನ್ನು ಎದುರಿಸಲು ಸಿದ್ದರಾಗಿರಬೇಕು.

ಸದ್ಯಕ್ಕೆ ಸಾಕು ಇಸ್ಟು. ನಿಮ್ಮಗಳ ಪ್ರೀತಿಗೆ ನಮ್ಮ ಶುಭಾಷಯಗಳು. ಪ್ರೀತಿಯ ಬಗೆಗೆ ಮತ್ತಸ್ಟು ಟಿಪ್ಸ್ ಬೇಕೆಂದ್ರೆ ಪ್ರೀತಿಯಂದ ಪತ್ರ ಬರೆಯಿರಿ. ಪ್ರೀತಿಯ ಟ್ರಿಪ್ ಗೆ ನಿಮ್ಮನ್ನ ನಮ್ಮ ಅಕ್ಕರೆಯ ಲೇಖನಗಳ ಮೂಲಕ ಕರ್ಕೊಂಡ್ ಹೋಗ್ತೀವಿ.ಅಲ್ಲಿಯವರೆಗೆ ನಿಮ್ಮ ಪ್ರೀತಿಯಿರಲಿ..


ಎಲ್ಲರಿಗೂ ಪ್ರೀತಿ ದಿನದ ಶುಭಾಷಯಗಳು.


ಲಿಂಗೇಶ್ ಹುಣಸೂರು